ವಿಶ್ವಕರ್ನಾಟಕ :-
 ಕನ್ನಡ ವಾರಪತ್ರಿಕೆ. ತಿರುಮಲೆ ತಾತಾಚಾರ್ಯ ಶರ್ಮರು ಮೈಸೂರ್ ಕ್ರಾನಿಕಲ್ ಎಂಬ ಇಂಗ್ಲಿಷ್ ವಾರಪತ್ರಿಕೆಯನ್ನು ಕೆ. ರಂಗ ಅಯ್ಯಂಗಾರ್ ಅವರಿಂದ ವಹಿಸಿಕೊಂಡು, ಅದೇ ಹೆಸರಿನಲ್ಲಿ ಕನ್ನಡದಲ್ಲಿ ಆರು ತಿಂಗಳ ಕಾಲ ನಡೆಸಿ, ಅನಂತರ 1925ರಲ್ಲಿ ಪತ್ರಿಕೆಗೆ ವಿಶ್ವಕರ್ನಾಟಕ ಎಂದು ನಾಮಕರಣ ಮಾಡಿ ಪ್ರಕಟಿಸತೊಡಗಿದರು. ಮಹಾತ್ಮಗಾಂಧಿಯವರು ಪತ್ರಿಕೆಯನ್ನು ಹರಸಿದ್ದರು. ರಾಷ್ಟ್ರೀಯ ಭಾವನೆ ಯನ್ನೂ ಪತ್ರಿಕಾ ಸ್ವಾತಂತ್ರ್ಯವನ್ನೂ ಎತ್ತಿ ಹಿಡಿಯುತ್ತ ಸಾಗಿದ್ದ ಈ ಪತ್ರಿಕೆ ಆಗ ಜಾರಿಗೆ ಬಂದ ಮೈಸೂರು ರಾಜ್ಯದ ವೃತ್ತ ಪತ್ರಿಕಾ ಶಾಸನವನ್ನು ಉಗ್ರವಾಗಿ ವಿರೋಧಿಸಿತ್ತು. ಅಗ್ರಲೇಖನವನ್ನು ಬರೆಯುವುದಿಲ್ಲ ಎಂಬ ಪ್ರತಿಜ್ಞೆಯನ್ನು ಕೈಗೊಂಡಿತ್ತು. 1936ರ ಹೊತ್ತಿಗೆ ವಾರ ಪತ್ರಿಕೆಯ ಜೊತೆಗೆ ವಿಶ್ವಕರ್ನಾಟಕ ದಿನ ಪತ್ರಿಕೆಯನ್ನು ಆರಂಭ ಮಾಡಲಾಯಿತು. ಅದರ ಸಂಪಾದಕರೂ ಶರ್ಮರೇ ಆಗಿದ್ದರು. ದಿನಪತ್ರಿಕೆ ಆರಂಭವಾದ ಮೇಲೆ ಮತ್ತೆ ಅಗ್ರಲೇಖನವನ್ನು ಬರೆಯಲು ಆರಂಭ ಮಾಡಲಾಯಿತು. 1942 ಹಾಗೂ 1945ರಲ್ಲಿ ಎರಡು ಸಲ ಸರ್ಕಾರ ವಿಧಿಸಿದ ಮುಟ್ಟುಗೋಲಿನಿಂದಾಗಿ ಪತ್ರಿಕೆ ಕೆಲವು ಕಾಲ ನಿಂತುಹೋಗಿತ್ತು. ಅನಂತರ ತಿ.ತಾ. ಶರ್ಮರ ಅನಾರೋಗ್ಯದಿಂದ ಸಿದ್ದವನಹಳ್ಳಿ ಕೃಷ್ಣಶರ್ಮರು ದಿನಪತ್ರಿಕೆಯ ಸಂಪಾದಕರಾಗಿದ್ದರು (1941-43). ಮುಂದೆ ವಾರಪತ್ರಿಕೆ ನಿಂತಿತು. ದಿನಪತ್ರಿಕೆ ವಾಣಿಜ್ಯೋದ್ಯಮಗಳಾದ ಎನ್ ರುದ್ರಯ್ಯ, ರಾಜಕಾರಣಿಗಳಾದ ಭಿಮಪ್ಪ ನಾಯಕ, ----ಗೋವಿಂದ ರೆಡ್ಡಿ, ಎಂ.ಗೋವಿಂದರೆಡ್ಡಿ ಮೊದಲಾದವರಿಂದ ಕೂಡಿದ ಕುಡು ಬಂಡವಾಳ ಸಂಸ್ಥೆ ಇಂಡಿಯಾ ಪಬ್ಲಿಕೇಶನ್ಸ್ ಲಿಮಿಟೆಡ್ ಆಡಳಿತಕ್ಕೆ ಸೇರಿತು. ಆ ವರೆಗೆ ಸಂಜೆ ಪತ್ರಿಕೆಯಾಗಿ ಪ್ರಕಟವಾಗುತ್ತಿದ್ದ ವಿಶ್ವಕರ್ನಾಟಕ ಮೊತ್ತಮೊದಲನೆಯ ಬೆಳಗಿನ ಕನ್ನಡ ದಿನಪತ್ರಿಕೆಯಾಯಿತು. ಎನ್.ಎಸ್. ವೆಂಕೋಬರಾಯರು ರೇಣುಕಾ ಆನಂದರಾವ್ ಅದರ ಸಂಪಾದಕರಾಗಿದ್ದರು. ಪತ್ರಿಕೆ 1956ರಲ್ಲಿ ನಿಂತುಹೋಯಿತು. ವಿಶ್ವಕರ್ನಾಟಕದಲ್ಲಿ ಉದ್ಯೋಗಿಯಾಗಿದ್ದ ತಿ.ಬಿ.ಧರಣೇಂಧ್ರಯ್ಯ ವಿಶ್ವಕರ್ನಾಟಕದ ಸಾಮ್ಯ ಪಡೆದು ಮುಂದುವರೆಸಿದರು.
 (ನೋಡಿ- ತಿರುಮಲೆ-ತಾತಾಚರ್ಯ-ಶರ್ಮ)				
		(ಸಿ.ಕೆ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ